Saturday, January 21, 2012

ದಾಂಡ್ ಕ್ರಿಕೆಟ್!


"ಯಂ ಬ್ರಹ್ಮ, ವರುಣ ಇಂದ್ರ ರುದ್ರ ಮರುತಹ.." ಆದಮೇಲೆ "ವಂದೇ ಮಾತರಂ". ಅದಾದಮೇಲೆ ಚಂದ್ರಶೇಖರಯ್ಯ  ಅವರಿಂದ "ಶಾಲೆ" ಅಂತ ಸುದೀರ್ಘವಾದ ಭಾಷಣ. ಕೊನೆಗೆ "ಜನ ಗಣ ಮನ" ಹಾಡಿ ಮುಗಿಸಿ ತರಗತಿಗೆ ಬರುವ ಹೊತ್ತಿಗೆ ನಮ್ಮಲ್ಲೇ ಒಬ್ಬ, ಶಿಕ್ಷಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ, "LNR is on leave..free period"  ಅನ್ನುತ್ತಿದ್ದ..ನಾವೆಲ್ಲ ಒಕ್ಕೋರಲಿನಲ್ಲಿ  "ಗೇಮ್ಸ್" ಎಂದು ಕಿರುಚಿ ವಿಜಯ ಹೈ ಸ್ಕೂಲ್ ನ ಹಿಂಬದಿಯ ಬಾಗಿಲಿಂದ ಮೈದಾನದ ಕಡೆಗೆ ಓಡುತ್ತಿದ್ದೆವು. ನಾವು ಆಡುತ್ತಿದ್ದದ್ದು ಒಂದೇ ಆಟ - ದಾಂಡ್ ಕ್ರಿಕೆಟ್!

ನಮ್ಮದು "G" ಸೆಕ್ಶನ್. "G" ಫಾರ್  "ಗೀಕ್ಸ್" ಎಂದು ಕೆಲವರು ಕರೆದರೆ, ಇನ್ನು ಕೆಲವರು "G" ಫಾರ್ "ಗೂಬೆಸ್" ಅನ್ನುತ್ತಿದ್ದರಂತೆ. "G" ಸೆಕ್ಶನ್ ಹುಡುಗರಿಗೆ ಇದ್ದ ಸಮಾನ ಆಸಕ್ತಿಗಳು ಎರಡು. ಒಂದು "ಗಟ್ ಹಾಕೋದು". ಎರಡೆನಯದು -  ದಾಂಡ್ ಕ್ರಿಕೆಟ್!

ಸುಮಾರು ಮೂರು ಅಡಿ ಉದ್ದದ, ಎಗ್ಗು ತಗ್ಗುಗಳಿಲ್ಲದ circular cross-section ಇದ್ದಂತಹ, ಸದೃಢ ವಾದ ಮರದ ರೆಂಬೆಯ ತುಂಡು - ದಾಂಡಿನ ಮೊದಲನೆಯ ವರ್ಶನ್. ಈ ದಾಂಡನ್ನು ನಾವು ಮೋರಿಯಲ್ಲಿ ಉದುರಿದ ಏಲೆಗಳ ಕೆಳಗೆ ಬಚ್ಚಿಡುತ್ತಿದ್ದೆವು. ಪೀಟೋಪಕರಣಗಳಿಗೆ ಉಪಯೋಗಿಸುವ ಬೆತ್ತ, ದಾಂಡಿನ ಎರಡನೇ ಆವೃತ್ತಿ. ರಘಿ ತರುತ್ತಿದ್ದ ಸ್ಟಿಕ್ಕರ್ ಇಲ್ಲದ ಬ್ಯಾಟಿಗೆ ನಾವು ತೇರ್ಗಡೆ ಯಾದದ್ದು ಬಹಳ ದಿನಗಳ ನಂತರ.

ದಾಂಡ್ ಕ್ರಿಕೆಟಿನ ಶುರುವಿನ ದಿನಗಳಲ್ಲಿ ನಾವು "ಕೋರ್ ಕೊಂಡು" ಆಡುತ್ತಿದ್ದೆವು. ವಿಜೆಯ್ ನಿಮ್ಕಡೆ. ಅಚ್ಚು ನಮ್ಕಡೆ. raichur ನಿಮಗೆ. ಧರ್ಣಿ ನಮಗೆ. ಅಭಿ ನಮಗಿರಲಿ. JP ನಿಮಗೆ. ವಿನ್ನಿ ನಿಮ್ಕಡೆ. ಕಾಮೇಶ ನಮ್ಕಡೆ. ಹೀಗೆ. ಅಮೇಲಿನ ದಿನಗಳಲ್ಲಿ ನಾವು "ಕೊರುತ್ತಿರಲಿಲ್ಲ". ನಮ್ಮಲ್ಲಿ ೨ ತಂಡಗಳು ರೂಪು ಗೊಂಡಿದ್ದವು. ತಂಡಗಳಲ್ಲಿ ಬದಲಾವಣೆಗಳು ಇರಲಿಲ್ಲ. ಈ ಎರಡು ತಂಡಗಳೇ ಸದಾ ಮುಖಾಮುಖೀ ಆಗುತ್ತಿದ್ದವು. "ಗಟ್" ಪಂಡಿತರಾದ ನಮಗೆ ಆಡಿದ ಮ್ಯಾಚ್ ಗಳ ಲೆಕ್ಕ, ಸೋಲು ಗೆಲುವಿನ ಲೆಕ್ಕ ನೆನಪಿಡುವುದು ಕಷ್ಟವಾಗುತ್ತಿರಲಿಲ್ಲ. ಗೆಲುವುಗಳ ಲೆಕ್ಕ ನಮ್ಮ ಸಾಧನೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿತ್ತು.

ನಾವು ದಾಂಡ್ ಕ್ರಿಕೆಟ್ ಆಡುತ್ತಿದ್ದ ಮೈದಾನದ ಹೆಸರು "triangular field". ಅದು ಬೌಲಿಂಗ್ ಮ್ಯಾಚ್ ಆಡುವಷ್ಟು ದೊಡ್ಡದಾಗಿರಲಿಲ್ಲ. ಹಾಗಾಗಿ ನಾವು "ಥ್ರೋ" ಆಡುತ್ತಿದ್ದೆವು. "legside" ನಲ್ಲಿ ಜಾಗ ಕಡಿಮೆ ಇದ್ದಿದ್ದರಿಂದ ನಾವು "1d, 2d" ಗಳನ್ನು ಉಪಯೋಗಿಸುತ್ತಿದ್ದೆವು.  "triangular field" ನ ಸುತ್ತಲೂ ರಸ್ತೆಗಳು. ಒಂದು ರಸ್ತೆಯ ಆಚೆ ಅಪ್ರಯೋಜಕ ಗಿಡಗಳಿದ್ದ ಸಣ್ಣ ಕಾಡು. ಅದನ್ನು ನಾವು ಮೊದಮೊದಲು "jurassic park" ಎಂದು ಕರೆಯುತ್ತಿದ್ದೆವು. ಅಲ್ಲಿ ಬಹಳ ಚೆಂಡುಗಳು ಕಳೆದು ಹೋಗುತ್ತಾ ಇದ್ದರಿಂದ ಅದನ್ನು ನಾವು "lost world" ಎಂದು ಮರು ನಾಮಕರಣ ಮಾಡಿದೆವು.

ಒಂದು ದಿನ ಸುಮಾರು ೧೦೦ kg ಭಾರವಿದ್ದ ಒಂದು size ಕಲ್ಲನ್ನು ಯಾರೋ ನಮ್ಮ ಮೈದಾನ ದಲ್ಲಿ ತಂದು ಹಾಕಿದ್ದರು. ಅಂದಿನಿಂದ ಅದು ನಮ್ಮ ಆಟಕ್ಕೆ ವಿಕೆಟ್ ಆಯಿತು. ಆ ಕಲ್ಲನ್ನು ನೆಟ್ಟಗೆ ನಿಲ್ಲಿಸುವುದು ಒಂದು ಭಗೀರತ ಪ್ರಯತ್ನ. ಒಮ್ಮೊಮ್ಮೆ ಅದು ಸರಿಯಾಗಿ ನಿಲ್ಲದೆ ಬ್ಯಾಟ್ಸಮನ್ ಕಾಲ ಮೇಲೆ ಬಿದ್ದು ಅಪಾಯ ವಾಗುತ್ತಿತ್ತು. JP ಮತ್ತು ವಿನ್ನಿ ಅದರ ಫಲಾನುಭವಿಗಳು.

ವಿ.ಹೆಚ್. ಎಸ್. ನಲ್ಲಿದ್ದ ೩ ವರ್ಷಗಳೂ ನಾವು "triangular field" ನಲ್ಲಿ  ದಾಂಡ್ ಕ್ರಿಕೆಟ್ ಆಡಿದೆವು. ಇದರಿಂದ ಎಷ್ಟೋ ಗೆಳೆತನಗಳು ಚಿಗುರಿದವು. ಜೀವದ ಗೆಳೆಯರು ಸಿಕ್ಕರು. ಬದುಕಿನ ಒಂದು ಅದ್ಭುತ ಸುಂದರ ನೆನಪು ದಾಂಡ್ ಕ್ರಿಕೆಟ್!

ನಮ್ಮ ಟೀಂ: ಅಚ್ಚು, ಅಭಿ, ವಿಜೆಯ್, ಧರಣಿ, JP, JV, MN, SN, ಪುಟ್ರಿ, ವಿಕಾಸ್, ಬೊಂಡು, ಭರತು, ಅರವಿಂದ್, ಪ್ರವೀಣ, ರಘಿ, ರಾಜಿ, ಜಿಗಣಿ, ರಾಯ್ಚುರ್, ಅನಂತ, ಕೆರ, ಅನಿಲ, ಹಲ್ಲಿ, ಸ್ಯಾಡು, ಸತೀಶ, ಕಡಂಬೆ, ವಿನ್ನಿ, ಕಾಮೇಶ, ಸಮೀರ್, ಗಿರೀಶ, ಚಂದ್ರಕೀರ್ತಿ, ಹಬ್ಬು - ಸದ್ಯಕ್ಕೆ ನೆನಪಿರುವುದು ಇಷ್ಟು..

No comments: