Monday, December 19, 2011

ಗೀಚುವಿಗೆ ೫೦


ಶಿವರಾಜ್ಕುಮಾರ್ ಗೆ ಕನ್ನಡ ಚಿತ್ರ ರಂಗದಲ್ಲಿ ಬೆಳ್ಳಿ ಹಬ್ಬದ ಸಂಭ್ರಮ."ಗೀಚು"ವಿಗೆ ೫೦ರ ಸಂಭ್ರಮ.ಶಿವರಾಜ್ಕುಮಾರ್ ಚಿತ್ರಗಳಲ್ಲಿ ಎಷ್ಟು ಓಡಿವೆಯೋ, ಇಲ್ಲಿರುವ ಒಳ್ಳೆ ಬರಹಗಳ ಸಂಖ್ಯೆ ಅಷ್ಟೇ.
  
ನನಗೆ ಪದಗಳನ್ನು ಪೋಣಿಸುವುದು ಎಂದರೆ ಇಷ್ಟ.ಭಾವಕ್ಕೆ ಅಕ್ಷರ ರೂಪವನ್ನು ಕೊಡುವುದರಲ್ಲಿ ಒಂಥರಾ ಮಜಾ. ಅದು, ಸುಡೋಕು ಮುಗಿಸಿದ ನಂತರ ಸಿಗುವಂಥ ಆನಂದ.ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಹೇಳುವುದರಲ್ಲಿ ಒಂದು ಕಿಕ್ ಇರುತ್ತದೆ.ಇಂಥ ಪುಟ್ಟ ಸಂತೋಷಗಳಿಗಾಗಿ ಬರೆದ ಬರಹಗಳು ಇಲ್ಲಿವೆ.ನನ್ನೆಲ್ಲಾ ಘನಘೋರ ಸೋಮಾರಿತನದ ಹೊರತಾಗಿಯೂ ಇಲ್ಲಿಯ ತನಕ ಬಂದಿದ್ದೇನೆ. ಖುಷಿಯಾಗಿದೆ.ಇಷ್ಟನ್ನು ಬರೆಯುವುದಕ್ಕೆ ೪ ವರ್ಷಗಳು ಬೇಕಾಯಿತು ಅನ್ನುವುದು ಮುಜುಗರದ ಸಂಗತಿ.೫೦ ಬರಹಗಳಿವೆ. ಓದಿಸಿಕೊಂಡರೆ ಓದಿ ಖುಷಿಪಡಿ. ಓದಿಸಿ ಕೊಂದರೆ, ಕ್ಷಮೆ ಇರಲಿ :)

ನನಗೆ ಅಕ್ಷರಗಳಷ್ಟೇ ಪ್ರೀತಿ, ಸಂಖ್ಯೆಗಳ ಮೇಲೆ. ಕೂಡುವ ಕಳೆಯುವ ಲೆಕ್ಕಗಳು ಇಷ್ಟ. ಹಾಗಾಗಿ ೫೦ರ ಈ ಲೆಕ್ಕಕ್ಕೆ ಸಂಭ್ರಮ.
ಶಿವರಾಜ್ಕುಮಾರ್ ಉಚ್ಚಾರದಷ್ಟೇ ಸ್ಪಷ್ಟ ಇಲ್ಲಿರುವ ಬರಹಗಳು.
ಪ್ರೀತಿ ಇರಲಿ. 

Sunday, December 18, 2011

ಬಿಡುಗಡೆ

ಸೋಲು ಒಂದು ನಿಲುಗಡೆ..
ಖುಷಿಯ ಹುಡುಕು ಒಳಗಡೆ..
ಪೆನ್ನು ಇಡು ಕೆಳಗಡೆ!
ಭಾವವೊಂದು ಬಿಡುಗಡೆ!!

Saturday, December 17, 2011

ಗರೀಬು ಹೃದಯ ಹಾಡಿದೆ

ಗರೀಬು ಹೃದಯ ಹಾಡಿದೆ..
ಖರಾಬು ಸಾಲು ಹೊಳೆದಿದೆ..
ಸಬೂಬು ಕೇಳಬಾರದೆ..
ಶರಾಬು ಒಳಗೆ ಇಳಿದಿದೆ..||೨||

ಮಳೆ ಬಂದು ನಿಂತು ಹೋಗಿದೆ..
ನೆನಪೊಂದು ಇಂದು ಕಾಡಿದೆ..
ಬಿಸಿಯಾದ ಕಾಫಿ ಇಲ್ಲದೆ..
ತಲೇನು ಕೆಟ್ಟು ಕೂತಿದೆ..
ನಿದ್ದೇನು ಬರದೆ ಹೋಗಿದೆ..ಬುದ್ಧಿಗೆ ಮಂಕು ಕವಿದಿದೆ..

ಗರೀಬು ಹೃದಯ ಹಾಡಿದೆ..
ಖರಾಬು ಸಾಲು ಹೊಳೆದಿದೆ..
ಸಬೂಬು ಕೇಳಬಾರದೆ..
ಶರಾಬು ಒಳಗೆ ಇಳಿದಿದೆ.. ||೨||

ಹಾಡೊಂದು ಬರೆಯಬೇಕಿದೆ..
ಸಾಲೊಂದು ಹುಡುಕಬೇಕಿದೆ..
ನೋವನ್ನು ಮರೆಯಬೇಕಿದೆ..
ಗೆಲುವನ್ನು ನೋಡಬೇಕಿದೆ..
ಖುಷೀನ ಹಂಚಬೇಕಿದೆ..ಗುರೀನ ತಲುಪಬೇಕಿದೆ..

ಗರೀಬು ಹೃದಯ ಹಾಡಿದೆ..
ಖರಾಬು ಸಾಲು ಹೊಳೆದಿದೆ!
ಸಬೂಬು ಕೇಳಬಾರದೆ..
ಶರಾಬು ಒಳಗೆ ಇಳಿದಿದೆ!!

(Written for this tune: http://www.youtube.com/watch?v=PmgVX-0W3vk&feature=related)

Thursday, December 15, 2011

ಜೀವನ ಪ್ರೀತಿ

ಕನಸಿನ ಹಿಂದೆ ಕನಸನು ಹೂಡು..
ನನಸಾಗಿಸಲು ಕೃಷಿಯನು ಮಾಡು..
ಜಾಡ್ಯವು ಎಂದೂ ಲೋಕದ ಪಾಡು..
ಆಡಿಸುವಾತನ ಮೆಚ್ಚಿಸಿ ನೋಡು..

ಕ್ರಿಯಾಶೀಲತೆ ಬದುಕಿನ ರೀತಿ!
ಚಿಮ್ಮಲಿ ದಿನವೂ ಜೀವನ ಪ್ರೀತಿ!!

Tuesday, December 13, 2011

ಗಡಿಗೆ

ಗತಿಸಿದ ಕ್ಷಣವನು ನೆನಪಿಗೆ ಕೂಡು..
ಮುಂದಿನ ಕ್ಷಣವನು ಬೆರಗಲಿ ನೋಡು..
ಈಗಿನ ಸಮಯವೇ ಅಮೃತ ಘಳಿಗೆ!
ಬದುಕೇ ಒಂದು ಮಾಯದ ಗಡಿಗೆ!! 

Thursday, November 17, 2011

ಸೃಷ್ಟಿ

ಬಾಳಿಗೆ ಹುಮ್ಮಸ್ಸು,ಸ್ಫೂರ್ತಿ, ಅರ್ಥವನ್ನು  ಚೈತನ್ಯವು ಕೊಡುತ್ತದೆ..ಚೈತನ್ಯವು ಸೃಷ್ಟಿಯಿಂದ ಹುಟ್ಟುತ್ತದೆ..ಸೃಷ್ಟಿಗೆ ಕಾಯಬೇಕು,ಕನಸಬೇಕು,ನೋಯಬೇಕು,ಅನುಭವಿಸಬೇಕು..ಮೇಲಾಗಿ ಸಮಯವನ್ನು ನೀಡಬೇಕು..ಸೃಷ್ಟಿ ತಪಸ್ಸು..ಅದು ಪರಿಶ್ರಮವನ್ನು ನಿರೀಕ್ಷಿಸುತ್ತದೆ...
ಆಲಸ್ಯ ಸೃಷ್ಟಿಯ ಶತ್ರು..
ಕಳೆದು ಹೋದ, ನೆನಪಿಗೆ ಬಾರದ ದಿನಗಳ ಹಿಂದೆ ನಮ್ಮ ಆಲಸ್ಯ ನಿಂತಿರುತ್ತದೆ..
ಅಚ್ಚಳಿಯದ ನೆನಪುಗಳ ಜೊತೆ ಯಾವುದೋ ಸೃಷ್ಟಿ ಇರುತ್ತದೆ..
ಸೃಜನಶೀಲತೆ ಸೃಷ್ಟಿಗೆ ಮೂಲ..
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ? ಯಾವೊನಿಗೊತ್ತು?

Saturday, November 12, 2011

ಪೆಟ್ಟಿಗೆ!

ಮಾಗಬೇಕು ಮನಸು ಇನ್ನು ಪೆಟ್ಟಿನಿಂದ ಪೆಟ್ಟಿಗೆ..
ಗೆಳೆಯರೆಲ್ಲ ದೇವರಂತೆ, ಬಾಳು ನೀನು ಒಟ್ಟಿಗೆ!
ಬದುಕು ಒಂದು ಪಗಡೆ ಆಟ, ಅದೃಷ್ಟದ ಮಟ್ಟಿಗೆ..
ಗಾಢವಾಗಿ ಬಾಳಿ ನೋಡು, ಬದುಕು ಸುಖದ ಪೆಟ್ಟಿಗೆ!!

Wednesday, November 2, 2011

ನಲ್ಮೆ

ಬಾಳಿನಲಿ ನಲ್ಮೆ ಕರೆದಾಗ..
ಬಾಗಬೇಕು ಅದಕೆ ನಾವಾಗ..
ನಕ್ಕುಬಿಡು ಒಮ್ಮೆ ನನಗೀಗ..
ಕೊಟ್ಟು ಬಿಡುವೆ ಎಲ್ಲ ಅನುರಾಗ!! 

Tuesday, November 1, 2011

ನಡಿಗೆ

ನನ್ನದು ನಿನ್ನದು ಒಂದೇ ನಡಿಗೆ..
ಸಾಗಲಿ ಬದುಕು ಹೊಸದರ ಕಡೆಗೆ..
ನಾವಿಕ ನಾನು ಬಾಳಲಿ ನಿನಗೆ..
ನಾಯಕಿ ನೀನು ನನ್ನಯ ಮನೆಗೆ!!

ವಿಷಯ

ಹೇಳಲು ವಿಷಯವು ಇದ್ದರೆ, ಪದಗಳು ಬರುವವು ಕರೆದರೆ..
ಪದಗಳ ಕದಿಯದೆ ಇದ್ದರೆ, ಪ್ರಾಸಕ್ಕಿಲ್ಲ ತೊಂದರೆ..
ಪ್ರಾಸವು ಹೊಂದಿಕೆಯಾದರೆ, ಕವಿತೆ ಇಂದ್ರನ ಅಪ್ಸರೆ..
ಕವಿತೆಗೆ ಆಶಯ ಇದ್ದರೆ, ಸಾಲುಗಳೆಲ್ಲ ಸಕ್ಕರೆ!!

ಆಯಸ್ಸೆಷ್ಟು

ನಿನ್ನಲ್ಲಿರುವ ಆಯಸ್ಸೆಷ್ಟು?
ಕಳೆದದ್ದೆಷ್ಟು? ಉಳಿದಿದ್ದೆಷ್ಟು?
ಗತಿಸಿದ ದಿನಗಳ ಸಾರ್ಥಕವೆಷ್ಟು?
ನಲಿವುಗಳೆಷ್ಟು? ನೋವಿನ್ನೆಷ್ಟು?
ಅಸಲಿಗೆ ನೀನು ಬದುಕಿದ್ದೆಷ್ಟು?

ಇಲ್ಲಿನ ಲೆಕ್ಕ ಬಲ್ಲವರೆಷ್ಟು?
ಬದುಕಿಗೆ ಅರ್ಥ ನೀನಿಟ್ಟಷ್ಟು!

Thursday, October 27, 2011

ಪ್ರಾಸ

ತೀರದ ಅಲೆಗಳ ಸನಿಹ..ತೀರದ ನೆನಪಿನ ದಾಹ
ಪ್ರಾಸಕ್ಕಾಗಿ ಪ್ರಾಸ..ಸಾಯೋ ಮುದುಕಿಯ ಶ್ವಾಸ 
ನಿದ್ದೆ ಬರದೆ ಇದ್ರೆ..ಹಾಡ್ಕೋ ಬಹುದು ಬಂದ್ರೆ 
ಪದಗಳ ನಡುವೆ ನಂಟು, ಇಲ್ಲದ ಕವನ ಉಂಟು :)

Friday, October 21, 2011

ಹರುಕು ಮುರುಕು

ಸಂಜೆಯಿಂದ ತಾಳೆ ಹಾಕಿ ಎಲ್ಲ ಪದಕು ಪದಕು..
ಏನೋ ಒಂದು ಹೇಳ ಹೊರಟೆ, ಅದೂ ಹರುಕು ಮುರುಕು..
ಕಡಲಿನಾಳ ಬಹಳ ಜಾಸ್ತಿ, ಮುತ್ತನೊಂದು ಹುಡುಕು..
ಇಲ್ಲಿ ನಿನ್ನ ಸಮಯ ಕಡಿಮೆ, ತೀಕ್ಷ್ಣವಾಗಿ ಬದುಕು!

Wednesday, October 19, 2011

ಬೆಳ್ಳಿ ಚುಕ್ಕಿ


ಶುಭ್ರ ನೀಲಿ ಆಕಾಶದಲಿ ಬೆಳ್ಳಿ ಚುಕ್ಕಿ ಮೂಡಿದೆ..
ನನ್ನ ನಿನ್ನ ನಡುವೆ ಇಂದು ಪ್ರೇಮ ಅರಳಿ ನಿಂತಿದೆ..
ಕಾಲವಂತೆ ಸಮಯವಂತೆ ಅದರ ಹಂಗು ಏತಕೆ?
ಕಯ್ಯ ಬೆರಳು ಹಿಡಿದು ನಡಿ ಲೋಕವೆಲ್ಲ ನಮ್ಮದೇ!

ರಂಗು

ಹೊಸತರಲ್ಲಿ ಎಲ್ಲ ವಿಷಯ ಬಹಳ ರಂಗು ರಂಗು..
ಹಗಲು ರಾತ್ರಿ ಸಂಜೆಗಳಲಿ ಸದಾ ಅದೇ ಗುಂಗು..
ಹಳೆಯದಾದ ಮೇಲೆ ಇನ್ನು ಇರದು ಅದರ ಹಂಗು..
ಬದುಕು ಮಾಯೆ ಎಂಬ ಸತ್ಯ ತಿಳಿಯಿತೀಗ ನಂಗು!

Tuesday, October 18, 2011

ಅಪ್ಪುಗೆ

ಮೋಡ ಕರಗಿ ಮಳೆಯು ಬರಲು ಅರಳಿತೊಂದು ಮಲ್ಲಿಗೆ
ದಣಿದ ಮನಕೆ ಮುದವ ನೀಡು, ಬೀಸು ಗಾಳಿ ತಣ್ಣಗೆ.. 
ಬಾಳ ಪಯಣದಲ್ಲಿ  ನಾವು  ಎಲ್ಲಿಂದಲೋ ಎಲ್ಲಿಗೆ?
ನಾನು ನೀವು ಗೆಳೆಯರೆಂದು ಇರಲಿ ಸಿಹಿಯ ಅಪ್ಪುಗೆ :)

Friday, October 14, 2011

ರೂಢಿ

ನಿನ್ನೆ ಎನ್ನುವುದು ಒಂದು ನೆನಪು. ನಾಳೆ ಎನ್ನುವುದು ಒಂದು ಕನಸು.
ನಿನ್ನೆಗಳನ್ನು ಮೆಲಕು ಹಾಕುವುದು, ನೆನಪುಗಳನ್ನು ಜೋಪಾನ ಮಾಡುವುದು ರೂಢಿ!
ನಾಳೆಗಳನ್ನು ಕಾಯುವುದು, ಕನಸುಗಳನ್ನು ಕಟ್ಟುವುದು ಸಹಜ.
ಆದರೆ ನಿನ್ನೆ ಮತ್ತು ನಾಳೆ ಎರಡೂ ಸುಳ್ಳು.
ನಿನ್ನೆ - ಕಳೆದು ಹೋದ ಗೆಳತಿಯ ತರಹ..
ನಾಳೆ  - ಕಲ್ಪನಾ ಲೋಕದ ಸ್ನಿಗ್ಧ ಸೌಂದರ್ಯವತಿಯ ಹಾಗೆ.
ನಿನ್ನೆಗಳನ್ನು ಕುರಿತು ಯೋಚಿಸುವುದು, ನಾಳೆಗಳ ಬಗ್ಗೆ ಕನಸುವುದು ಈಗಿನ ಸಮಯವನ್ನು ಕಳೆಯುವುದಕ್ಕಷ್ಟೇ ಸಹಾಯಕ.
ಅವುಗಳಿಂದ ಮತ್ತೇನು ಪ್ರಯೋಜನವಿಲ್ಲ.
ಹಾಗಾಗಿ ಈಗಿನ ಕ್ಷಣಗಳನ್ನು ಅಷ್ಟೇ ಅನುಭವಿಸೋಣ..ನಿನ್ನೆ ನಾಳೆಗಳ ಬಗ್ಗೆ ಯೋಚನೆ ಬೇಡ ಎಂದು ಹೇಳುವುದು, ಬರೆಯುವುದು ಚೆಂದ.

Monday, October 10, 2011

ನಮ್ಮಂತೆ ನಾವು

ದೇವ್ರಂಥ ದೇವ್ರೇ ಕನಸಲ್ಲಿ ಬಂದ
ಕಿವಿ ಮಾತು ಹೇಳ್ತೀನಿ ಕೇಳಸ್ಕೋ ಅಂದ
ನಮ್ಮಂತೆ ನಾವು ಇರಬೇಕು, ಕಂದ!
ನಮ್ಮನೆ ಕನ್ನಡೀಲಿ ನಾವ್ ಯಾವತ್ತೂ ಚೆಂದ!!

Saturday, October 8, 2011

ಓಡುವ ನಾವು

ಸದಾ ಓಡುವ ನಾವು, ಏನೂ ಮಾಡದೇ ಇರುವುದು ಅಪರಾಧ ಎಂಬಂತೆ ಪರಿಗಣಿಸುತ್ತೇವೆ.

ಓದಬೇಕು, ದುಡಿಯ ಬೇಕು, ಪ್ರಪಂಚ ನೋಡಬೇಕು, ದುಡ್ಡು ಮಾಡಬೇಕು, ಪ್ರೀತಿಸಬೇಕು, ನೋಯಬೇಕು, ಕಾಯಬೇಕು, ಕೊರಗಬೇಕು - ಒಟ್ಟಿನಲ್ಲಿ ಏನೋ ಒಂದು ಮಾಡುತ್ತಿರಬೇಕು.ಕ್ರಿಯಾಶೀಲತೆ ಇಲ್ಲದೆ ದಿನಗಳು ನಮ್ಮ ಬದುಕಿನಲ್ಲಿ ಕಳೆದು ಹೋದ ಅಮೂಲ್ಯ ಘಳಿಗೆಗಳು.

ಆದರೆ ಏನೂ ಮಾಡದೆ, ಹೊರಗೆ ಬೀಳುವ ತುಂತುರು ಮಳೆಯನ್ನೂ ನೋಡುತ್ತಾ ಕೂರುವುದು ಯಾವ ಪುರುಶಾರ್ಥವನ್ನು ಸಾಧಿಸದೆ ಇದ್ದರೂ ಒಂದು ಖುಷಿಯನ್ನು ಕೊಡುತ್ತದೆ.ಕೊರೆಯುವ ಛಳಿಯ ಮುಂಜಾನೆ ಏನೂ ಮಾಡದೆ ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ಅದು ಒಂದು ದಿವ್ಯ ಆನಂದವನ್ನು ನೀಡುತ್ತದೆ.

ಬದುಕಿನ ಸಣ್ಣ ಸುಖಗಳನ್ನು ಮರೆಯುವುದು ಬೇಡ. ಏನೂ ಮಾಡದೇ ಇರುವುದು ಒಂದು ಸೌಖ್ಯ.ಅದರಲ್ಲೂ ಒಂದು ಮಜವಿದೆ!

ಅಂದಹಾಗೆ ಇಲ್ಲಿ ಈಗ ಚಳಿಗಾಲ :)

Tuesday, October 4, 2011

ಬದುಕು

ಬದುಕು ಅನಿರೀಕ್ಷಿತ ತಿರುವುಗಳ ಸರಮಾಲೆ.

ಕೆಲವು ತಿರುವುಗಳು ನಮ್ಮ ಇಚ್ಚೆಗೆ, ಹಂಬಲಕ್ಕೆ ಹೊಂದುವ ಹಾಗಿದ್ದರೆ ಇನ್ನು ಕೆಲವು ಅವುಗಳಿಗೆ ವಿರುಧ್ಧವಾದವು.
ನಮಗೆ ಸರಿ ಹೊಂದುವ ತಿರುವುಗಳನ್ನು ಒಪ್ಪಿಕೊಳ್ಳುವ ನಾವು, ನಮಗೆ ಸರಿ ಹೊಂದದ ತಿರುವುಗಳನ್ನು ಪ್ರತಿಭಟಿಸುತ್ತೇವೆ.
ನಮಗೆ ಬೇಕಾದ ತಿರುವುಗಳು ಬಂದಾಗ ಅವು ಘಟಿಸಲೇ ಬೇಕಾದ ತಿರುವುಗಳೇ ಎಂಬಷ್ಟು ಒಪ್ಪಿಕೊಳ್ಳುವ ನಾವು, ನಮಗೆ ಬೇಡದ ತಿರುವುಗಳು ಬಂದಾಗ ನನ್ನಂಥವನಿಗೆ/ನನ್ನಂಥವಳಿಗೆ ಹೀಗಾಗಬೇಕೆ ಎಂದು ದೂಷಿಸುವುದು ಎಷ್ಟು ಸರಿ?
ನಾವು ಇಚ್ಚಿಸುವ ಮತ್ತು ಇಚ್ಚಿಸದ ತಿರುವುಗಳೂ ಎರಡೂ ಅನಿರೀಕ್ಷಿತವಾಗಿದ್ದಾಗ ನಾವೇಕೆ ಎರಡನ್ನು ಒಂದೇ ತರಹ ಸ್ವೀಕರಿಸುವುದಿಲ್ಲ?

ಬದುಕು ನಿರ್ಭಾವುಕ, ನಿರ್ಲಜ್ಜ ಮತ್ತು ನಿರಾಕಾರ. ಅದಕ್ಕೆ ಶಪಿಸಿದರೆ ತಿಳಿಯುವುದಿಲ್ಲ. ಹೊಗಳಿದರೆ ಉಬ್ಬುವುದಿಲ್ಲ.

ಬದುಕು ಇರುವುದೇ ಹೀಗೆ..ಇದನ್ನು ತಡೆಯದೆ, ಒಪ್ಪದೇ, ಸಹಿಸದೆ, ಪ್ರತಿಭಟಿಸುವುದಕ್ಕಿಂತ, ಬದುಕು ಇರುವುದೇ ಹೀಗೆ ಎಂದುಕೊಂಡು ಬದುಕುವುದೇ ಚೆಂದ.ಎಂದಿಗೆ ನಮ್ಮ ಮತ್ತು ಬದುಕಿನ ನಡುವೆ ಘರ್ಷಣೆ ನಿಲ್ಲುವುದೋ ಅಂದಿನಿಂದ ಬದುಕು ಎಂದಿಗೂ ಸಹನೀಯವೇನೋ..ಬಲ್ಲವರಾರು??

Monday, September 12, 2011

ಗಾಂಚಾಲಿ

ನಾನು ಸಾಚ, ಪುಣ್ಯಾತ್ಮ ಅನ್ನೋ ಗುಂಗಲ್ಲಿ,
ಬದುಕು ನನಗೆ ಹಾಗೆ ಇರಬೇಕ್ ಅನ್ನೋದ್ ಗಾಂಚಾಲಿ!
ಪ್ರಾಣಿ ಹತ್ಯೆ ಮಹಾ ಪಾಪ ಅಂತಿದ್ರೆ ಬಲಿ,
ನೀತಿ ಪಾಠ ಕೇಳಿಕೊಂಡು ಕೂರುತ್ತ ಹುಲಿ?

Tuesday, August 23, 2011

ಕೆಸ್ರು

ಎಷ್ಟೇ ನೀನು ಪಡೆದಿರಬಹುದು
ದುಡ್ಡು, ಆಸ್ತಿ, ಹೆಸ್ರು !
ಬಾಯಿಗ್ ಬೀಗ ಹಾಕ್ದೆ ಇದ್ರೆ
ನೀನ್, ಹಂದಿ ಇರೋ ಕೆಸ್ರು !!

ಮಾತು ಮನಸಿನ ಕನ್ನಡಿ

ನಾಲಿಗೆ ಮೇಲೆ ಇರಬೇಕ್ ನಿಗಾ
ಮಾತು ಮನಸಿನ ಕನ್ನಡಿ !
ಮನ್ಶ್ಯ ಮನ್ಶ್ಯನ್ ಪ್ರೀತಿಸಬೇಕು
ಖುಷಿಗೆ ಅದೇ ಕಯ್ಪಿಡಿ !!

ದೊಡ್ಡೋರಲ್ಲ

ವಯಸ್ ಆಗಿದ್ಕೆ ದೊಡ್ಡೋರಲ್ಲ
ಇರಬೇಕ್ ತಲೇಲ್ ಬುದ್ದಿ !
ದೇವ್ರೂ ಕೂಡ ಸುಸ್ತಾದ್ನಲ್ಲ
ಸಾಕಾಯ್ತ್ ಅವ್ನ್ಗೂ ತಿದ್ದಿ !!

Tuesday, August 16, 2011

ಬದುಕು ಮಾಯೆಯ ಆಟ

ಬಿಸಿಲು ಕುದುರೆಯ ಬೆನ್ನು ಹತ್ತಿದ ಓಟ!
ಮಾಯಾ ಜಿಂಕೆಯೇ ಬೇಕೆಂಬ ಹುಂಬ ಹಠ!
ತಲೆಮಾರುಗಳಿಂದಲೂ ಇದೇ ಪರಿಪಾಠ!
ಇನ್ನಾದರೂ ನಿಲ್ಲಲಿ ಈ ಹುಚ್ಚಾಟ!

ಕಲಿ ಜೀವನದ ಪಾಠ..
ಬದುಕು ಮಾಯೆಯ ಆಟ!!

Saturday, August 13, 2011

ಕನಸು

ಸಾಲು ಸಾಲು ಕನಸುಗಳು, ಮೆರವಣಿಗೆಯಲಿ ಬಂದಿದೆ
ಮನದ ಕನಸಿನೂರಿನೊಳಗೆ ಪ್ರವೇಶ ಕೋರಿ ಕಾದಿವೆ

ಚಿಕ್ಕ ಕನಸು, ದೊಡ್ಡ ಕನಸು, ಮುರಿದ ಕನಸು, ಮರೆತ ಕನಸು
ಎಲ್ಲವು ಬಾಗಿಲಲ್ಲೇ ನಿಂತಿವೆ, ಪ್ರವೇಶ ಕೋರಿ ಕಾದಿವೆ

ಅರ್ಹತೆಯ ಚೀಟಿಯನ್ನು ಎಲ್ಲ ಕನಸು ನೀಡಿವೆ
ಎಲ್ಲವು ಹಿತವಾಗಿರಲು ಆಯ್ಕೆ ಕಷ್ಟವಾಗಿದೆ

ಒಂದು ಹೆಚ್ಚು ಒಂದು ಕಡಿಮೆ ಎಂಬ ಭೇದವೇತಕೆ
ಎಲ್ಲ ಕನಸು ನನ್ನವೇ - ತಾರತಮ್ಯ ಸಾಧ್ಯವೇ?

ನನ್ನ ಕನಸಿನೂರಿಗೆ ಪ್ರವೇಶ ಮುಕ್ತವಾಗಿದೆ !!
ಎಲ್ಲ ಕನಸು ಹೊತ್ತುಕೊಂಡು ಮುಂದೆ ಸಾಗಬೇಕಿದೆ!!

Thursday, July 14, 2011

ಕ್ಲಿಷ್ಟ

ಮುನ್ನುಡಿ, ಬೆನ್ನುಡಿ, ಚೆನ್ನುಡಿ, ನಾಣ್ಣುಡಿ
ಪ್ರಪಾತ, ದಿಗಂತ, ಅನಂತ, ಏಕಾಂತ
ಕೆಚ್ಚೆದೆ, ಕಾರ್ಮುಗಿಲು, ಕಗ್ಗತ್ತಲು, ಕಂಗಾಲು
-ಇಂಥ ಕ್ಲಿಷ್ಟ ಪದಗಳ ಬಳಸದೆ ಬರೆದ ಕವನ..

ಇಷ್ಟ ಆದ್ರೆ ಮತ್ತೆ ಓದಿಬಿಡಿ
ಇಲ್ಲದಿದ್ರೆ ನಕ್ಕು ಮುಂದೆ ನಡಿ!

ಛಲೋ

ನನ್ನದೊಂದು ವಿನಂತಿ
ಎಲ್ಲದಕ್ಕೂ ಯಾಕ್ 'ಹೂಂ' ಅಂತಿ?
ಇಲ್ಲ ಅನ್ನೋದ್ ಯಾವಾಗ್ ಕಲೀತಿ
-ಆಗ್ ನಿನ್ ಬಾಳು ಛಲೋ ಆಗ್ತೈತಿ!!

ನಾನಂದ್ರೆ ನಂಗಿಷ್ಟ

ಏನೇ ಗೆದ್ದರೂ, ಎಷ್ಟೇ ಸೋತರೂ,
ಏನೆಲ್ಲಾ ಪಡೆದರೂ, ಎಲ್ಲ ಕಳೆದರೂ,
ಯಾರೇ ಬಂದರೂ, ಎಲ್ಲ ಹೋದರೂ,
ಒಂದಂತು ಸ್ಪಷ್ಟ..ನಾನಂದ್ರೆ ನಂಗಿಷ್ಟ !!

ಕವನ?

ಚಟ್ನಿ ಪುಡಿ ಖಾರದ ಪುಡಿ..
ಅನ್ನದ ಜೊತೆ ಕಲಸಿಬಿಡಿ..
ಖಾರ ಆದ್ರೆ ನೀರು ಕುಡಿ..
ಊಟ ಆಯಿತು ಮಲಗು ನಡಿ..

ಇದೂ ಒಂದು ಕವನ?
ಬರೆಯಬಾರದು ಇಂಥವನ್ನ!!

Thursday, June 9, 2011

ರೋಗ

ಗಾಳಿ ನೀರು ಸೂರ್ಯ ಚಂದ್ರ
ಯಾವಾಗಾದ್ರೂ ಕೊಚ್ಕೊಂಡಿದ್ರ
ಮನ್ಶಂಗ್ ಮಾತ್ರ ಯಾಕೀ ರೋಗ
ಹಾಕ್ಕೊಬಾರ್ದ ಬಾಯಿಗ್ ಬೀಗ!!

Saturday, April 30, 2011

ದರ್ದು

ಅನ್ಕೊಂಡಿದ್ದು ಅನ್ಕೊಂಡಾಗ್ಲೇ ಆಗ್ಬೇಕ್ ಅನ್ನೋ ದರ್ದು
ಇರೋದೇನೋ ಸರಿ ಆದ್ರೆ ಜೀವನ ಹಂಗೆ ಇರ್ದು
ಕಾಯೋದ್ ಬಿಟ್ಟು ಕೆಲ್ಸ ಮಾಡ್ಬೇಕ್ ತಲೆ ಕೆಡ್ಸ್ಕೋ  ಬಾರ್ದು
ಕೊಡ್ಬೇಕದಾಗ್  ಅವ್ನೆ ಕೊಡ್ತಾನ್ ಬೇಡ ಅಂದ್ರು ಕರ್ದು

Wednesday, April 27, 2011

ನೀರಿನ್ ಮೇಲಿನ್ ಗುಳ್ಳೆ

ನೀರಿನ್ ಮೇಲಿನ್ ಗುಳ್ಳೆ ಥರ ಖುಷಿ ಅನ್ನೋದ್ ತಿಳ್ಕೋ
ಆಗಿಂದಾಗ್ಗೆ ಸತ್ ಹೋಗತ್ತೆ ಮತ್ತೆ ಅದನ್ ಪಡ್ಕೋ
ನಾನ್ ಹೇಳಿದ್ ಸರಿ ಅನ್ನಿಸ್ತಿದ್ರೆ ತಲೇಗ್ ಹುಳ ಬಿಟ್ಕೋ
funda ಜಾಸ್ತಿ ಅಂತನ್ಸಿದ್ರೆ ಬೆಚ್ಚಗ್ ಹೊದ್ ಕೊಂಡ್ ಮಲ್ಕೋ

Sunday, April 24, 2011

ಹಾಳಾದ ಸಂಜೆ

ಹಾಳಾದ ಸಂಜೆ, ಕೂತಿರಲು ನಾನು 
ನೆನಪೊಂದು ತೇಲಿ ಬಂತು 
ಮೃತವಾದ ಕನಸು ಮತ್ತೊಮ್ಮೆ ಚಿಗುರಿ 
ಹೊಸ ಆಸೆ ನನ್ನಲಿಂದು

ನೂರೊಂದನೆ ಬಾರಿಗೆ ಹೀಗಾಗಿದೆ
ಆ ನೂರೂ ಸಲಗಳೂ ಸೋತಾಗಿದೆ 

ಭರವಸೆಯೇ ಇಲ್ಲದೆ ದಾರಿ ಕಾಯುವೆ
ಯಾಕೆ ಇಂಥ ಪಾಡು?
ಇಂದಾದರೂನು ಈ ನನ್ನ ಕನಸು
ನನಸಾಗುವಂತೆ ಮಾಡು