Thursday, October 27, 2011

ಪ್ರಾಸ

ತೀರದ ಅಲೆಗಳ ಸನಿಹ..ತೀರದ ನೆನಪಿನ ದಾಹ
ಪ್ರಾಸಕ್ಕಾಗಿ ಪ್ರಾಸ..ಸಾಯೋ ಮುದುಕಿಯ ಶ್ವಾಸ 
ನಿದ್ದೆ ಬರದೆ ಇದ್ರೆ..ಹಾಡ್ಕೋ ಬಹುದು ಬಂದ್ರೆ 
ಪದಗಳ ನಡುವೆ ನಂಟು, ಇಲ್ಲದ ಕವನ ಉಂಟು :)

Friday, October 21, 2011

ಹರುಕು ಮುರುಕು

ಸಂಜೆಯಿಂದ ತಾಳೆ ಹಾಕಿ ಎಲ್ಲ ಪದಕು ಪದಕು..
ಏನೋ ಒಂದು ಹೇಳ ಹೊರಟೆ, ಅದೂ ಹರುಕು ಮುರುಕು..
ಕಡಲಿನಾಳ ಬಹಳ ಜಾಸ್ತಿ, ಮುತ್ತನೊಂದು ಹುಡುಕು..
ಇಲ್ಲಿ ನಿನ್ನ ಸಮಯ ಕಡಿಮೆ, ತೀಕ್ಷ್ಣವಾಗಿ ಬದುಕು!

Wednesday, October 19, 2011

ಬೆಳ್ಳಿ ಚುಕ್ಕಿ


ಶುಭ್ರ ನೀಲಿ ಆಕಾಶದಲಿ ಬೆಳ್ಳಿ ಚುಕ್ಕಿ ಮೂಡಿದೆ..
ನನ್ನ ನಿನ್ನ ನಡುವೆ ಇಂದು ಪ್ರೇಮ ಅರಳಿ ನಿಂತಿದೆ..
ಕಾಲವಂತೆ ಸಮಯವಂತೆ ಅದರ ಹಂಗು ಏತಕೆ?
ಕಯ್ಯ ಬೆರಳು ಹಿಡಿದು ನಡಿ ಲೋಕವೆಲ್ಲ ನಮ್ಮದೇ!

ರಂಗು

ಹೊಸತರಲ್ಲಿ ಎಲ್ಲ ವಿಷಯ ಬಹಳ ರಂಗು ರಂಗು..
ಹಗಲು ರಾತ್ರಿ ಸಂಜೆಗಳಲಿ ಸದಾ ಅದೇ ಗುಂಗು..
ಹಳೆಯದಾದ ಮೇಲೆ ಇನ್ನು ಇರದು ಅದರ ಹಂಗು..
ಬದುಕು ಮಾಯೆ ಎಂಬ ಸತ್ಯ ತಿಳಿಯಿತೀಗ ನಂಗು!

Tuesday, October 18, 2011

ಅಪ್ಪುಗೆ

ಮೋಡ ಕರಗಿ ಮಳೆಯು ಬರಲು ಅರಳಿತೊಂದು ಮಲ್ಲಿಗೆ
ದಣಿದ ಮನಕೆ ಮುದವ ನೀಡು, ಬೀಸು ಗಾಳಿ ತಣ್ಣಗೆ.. 
ಬಾಳ ಪಯಣದಲ್ಲಿ  ನಾವು  ಎಲ್ಲಿಂದಲೋ ಎಲ್ಲಿಗೆ?
ನಾನು ನೀವು ಗೆಳೆಯರೆಂದು ಇರಲಿ ಸಿಹಿಯ ಅಪ್ಪುಗೆ :)

Friday, October 14, 2011

ರೂಢಿ

ನಿನ್ನೆ ಎನ್ನುವುದು ಒಂದು ನೆನಪು. ನಾಳೆ ಎನ್ನುವುದು ಒಂದು ಕನಸು.
ನಿನ್ನೆಗಳನ್ನು ಮೆಲಕು ಹಾಕುವುದು, ನೆನಪುಗಳನ್ನು ಜೋಪಾನ ಮಾಡುವುದು ರೂಢಿ!
ನಾಳೆಗಳನ್ನು ಕಾಯುವುದು, ಕನಸುಗಳನ್ನು ಕಟ್ಟುವುದು ಸಹಜ.
ಆದರೆ ನಿನ್ನೆ ಮತ್ತು ನಾಳೆ ಎರಡೂ ಸುಳ್ಳು.
ನಿನ್ನೆ - ಕಳೆದು ಹೋದ ಗೆಳತಿಯ ತರಹ..
ನಾಳೆ  - ಕಲ್ಪನಾ ಲೋಕದ ಸ್ನಿಗ್ಧ ಸೌಂದರ್ಯವತಿಯ ಹಾಗೆ.
ನಿನ್ನೆಗಳನ್ನು ಕುರಿತು ಯೋಚಿಸುವುದು, ನಾಳೆಗಳ ಬಗ್ಗೆ ಕನಸುವುದು ಈಗಿನ ಸಮಯವನ್ನು ಕಳೆಯುವುದಕ್ಕಷ್ಟೇ ಸಹಾಯಕ.
ಅವುಗಳಿಂದ ಮತ್ತೇನು ಪ್ರಯೋಜನವಿಲ್ಲ.
ಹಾಗಾಗಿ ಈಗಿನ ಕ್ಷಣಗಳನ್ನು ಅಷ್ಟೇ ಅನುಭವಿಸೋಣ..ನಿನ್ನೆ ನಾಳೆಗಳ ಬಗ್ಗೆ ಯೋಚನೆ ಬೇಡ ಎಂದು ಹೇಳುವುದು, ಬರೆಯುವುದು ಚೆಂದ.

Monday, October 10, 2011

ನಮ್ಮಂತೆ ನಾವು

ದೇವ್ರಂಥ ದೇವ್ರೇ ಕನಸಲ್ಲಿ ಬಂದ
ಕಿವಿ ಮಾತು ಹೇಳ್ತೀನಿ ಕೇಳಸ್ಕೋ ಅಂದ
ನಮ್ಮಂತೆ ನಾವು ಇರಬೇಕು, ಕಂದ!
ನಮ್ಮನೆ ಕನ್ನಡೀಲಿ ನಾವ್ ಯಾವತ್ತೂ ಚೆಂದ!!

Saturday, October 8, 2011

ಓಡುವ ನಾವು

ಸದಾ ಓಡುವ ನಾವು, ಏನೂ ಮಾಡದೇ ಇರುವುದು ಅಪರಾಧ ಎಂಬಂತೆ ಪರಿಗಣಿಸುತ್ತೇವೆ.

ಓದಬೇಕು, ದುಡಿಯ ಬೇಕು, ಪ್ರಪಂಚ ನೋಡಬೇಕು, ದುಡ್ಡು ಮಾಡಬೇಕು, ಪ್ರೀತಿಸಬೇಕು, ನೋಯಬೇಕು, ಕಾಯಬೇಕು, ಕೊರಗಬೇಕು - ಒಟ್ಟಿನಲ್ಲಿ ಏನೋ ಒಂದು ಮಾಡುತ್ತಿರಬೇಕು.ಕ್ರಿಯಾಶೀಲತೆ ಇಲ್ಲದೆ ದಿನಗಳು ನಮ್ಮ ಬದುಕಿನಲ್ಲಿ ಕಳೆದು ಹೋದ ಅಮೂಲ್ಯ ಘಳಿಗೆಗಳು.

ಆದರೆ ಏನೂ ಮಾಡದೆ, ಹೊರಗೆ ಬೀಳುವ ತುಂತುರು ಮಳೆಯನ್ನೂ ನೋಡುತ್ತಾ ಕೂರುವುದು ಯಾವ ಪುರುಶಾರ್ಥವನ್ನು ಸಾಧಿಸದೆ ಇದ್ದರೂ ಒಂದು ಖುಷಿಯನ್ನು ಕೊಡುತ್ತದೆ.ಕೊರೆಯುವ ಛಳಿಯ ಮುಂಜಾನೆ ಏನೂ ಮಾಡದೆ ಬೆಚ್ಚಗೆ ಹೊದ್ದುಕೊಂಡು ಮಲಗಿದರೆ ಅದು ಒಂದು ದಿವ್ಯ ಆನಂದವನ್ನು ನೀಡುತ್ತದೆ.

ಬದುಕಿನ ಸಣ್ಣ ಸುಖಗಳನ್ನು ಮರೆಯುವುದು ಬೇಡ. ಏನೂ ಮಾಡದೇ ಇರುವುದು ಒಂದು ಸೌಖ್ಯ.ಅದರಲ್ಲೂ ಒಂದು ಮಜವಿದೆ!

ಅಂದಹಾಗೆ ಇಲ್ಲಿ ಈಗ ಚಳಿಗಾಲ :)

Tuesday, October 4, 2011

ಬದುಕು

ಬದುಕು ಅನಿರೀಕ್ಷಿತ ತಿರುವುಗಳ ಸರಮಾಲೆ.

ಕೆಲವು ತಿರುವುಗಳು ನಮ್ಮ ಇಚ್ಚೆಗೆ, ಹಂಬಲಕ್ಕೆ ಹೊಂದುವ ಹಾಗಿದ್ದರೆ ಇನ್ನು ಕೆಲವು ಅವುಗಳಿಗೆ ವಿರುಧ್ಧವಾದವು.
ನಮಗೆ ಸರಿ ಹೊಂದುವ ತಿರುವುಗಳನ್ನು ಒಪ್ಪಿಕೊಳ್ಳುವ ನಾವು, ನಮಗೆ ಸರಿ ಹೊಂದದ ತಿರುವುಗಳನ್ನು ಪ್ರತಿಭಟಿಸುತ್ತೇವೆ.
ನಮಗೆ ಬೇಕಾದ ತಿರುವುಗಳು ಬಂದಾಗ ಅವು ಘಟಿಸಲೇ ಬೇಕಾದ ತಿರುವುಗಳೇ ಎಂಬಷ್ಟು ಒಪ್ಪಿಕೊಳ್ಳುವ ನಾವು, ನಮಗೆ ಬೇಡದ ತಿರುವುಗಳು ಬಂದಾಗ ನನ್ನಂಥವನಿಗೆ/ನನ್ನಂಥವಳಿಗೆ ಹೀಗಾಗಬೇಕೆ ಎಂದು ದೂಷಿಸುವುದು ಎಷ್ಟು ಸರಿ?
ನಾವು ಇಚ್ಚಿಸುವ ಮತ್ತು ಇಚ್ಚಿಸದ ತಿರುವುಗಳೂ ಎರಡೂ ಅನಿರೀಕ್ಷಿತವಾಗಿದ್ದಾಗ ನಾವೇಕೆ ಎರಡನ್ನು ಒಂದೇ ತರಹ ಸ್ವೀಕರಿಸುವುದಿಲ್ಲ?

ಬದುಕು ನಿರ್ಭಾವುಕ, ನಿರ್ಲಜ್ಜ ಮತ್ತು ನಿರಾಕಾರ. ಅದಕ್ಕೆ ಶಪಿಸಿದರೆ ತಿಳಿಯುವುದಿಲ್ಲ. ಹೊಗಳಿದರೆ ಉಬ್ಬುವುದಿಲ್ಲ.

ಬದುಕು ಇರುವುದೇ ಹೀಗೆ..ಇದನ್ನು ತಡೆಯದೆ, ಒಪ್ಪದೇ, ಸಹಿಸದೆ, ಪ್ರತಿಭಟಿಸುವುದಕ್ಕಿಂತ, ಬದುಕು ಇರುವುದೇ ಹೀಗೆ ಎಂದುಕೊಂಡು ಬದುಕುವುದೇ ಚೆಂದ.ಎಂದಿಗೆ ನಮ್ಮ ಮತ್ತು ಬದುಕಿನ ನಡುವೆ ಘರ್ಷಣೆ ನಿಲ್ಲುವುದೋ ಅಂದಿನಿಂದ ಬದುಕು ಎಂದಿಗೂ ಸಹನೀಯವೇನೋ..ಬಲ್ಲವರಾರು??