Sunday, February 12, 2012

ಬಂತು ಬಂತು ಕರೆಂಟು ಬಂತು..

೯೦ ರ ದಶಕದಲ್ಲಿ ಬಂದ ಈ ಹಾಡು, ಅಂದಿನ ಪಡ್ಡೆ ಹುಡುಗರ anthem..
ಅದ್ಭುತ ಟ್ಯೂನ್, ಭಯಂಕರ ಬೀಟ್ಸ್, ಚೆಂದದ ನೃತ್ಯ ಸಂಯೋಜನೆ, ಸುಂದರ ಹೆಣ್ಣು, ಅವಳ ಖಡಕ್ body language - ಇಷ್ಟು ಸೇರಿದರೆ ಇಂಥ ಹಾಡಿನ ಸೃಷ್ಟಿ ಆಗುತ್ತದೆ.ಹಂಸಲೇಖ ಈ ಹಾಡಿನ ಸ್ವರ ಸಂಯೋಜಕ ಮತ್ತು ಸಾಹಿತಿ.ಹಂಸಲೇಖ ದ್ವೇಷಿಗಳು ಇಲ್ಲಿಗೆ ಓದುವುದನ್ನು ನಿಲ್ಲಿಸಬೇಕಾಗಿ ವಿನಂತಿ.
ಕನ್ನಡ ಚಿತ್ರರಂಗ ಕಂಡ ಮಹಾನ್ ಕಲೆಗಾರ ಹಂಸಲೇಖ.ಆಡು ಭಾಷೆಯನ್ನು ಚಿತ್ರಸಾಹಿತ್ಯಕ್ಕೆ ಉಪಯೋಗಿಸುತ್ತಾ, ತುಂಟುತನವನ್ನು, ತತ್ವಗಳನ್ನು ಒಮ್ಮೆಲೇ ಹೇಳಿರುವ ಹಾಡು ಇದು.ಸಾಲುಗಳು ಬಾಯಲ್ಲಿ ಸುಲಭವಾಗಿ ಕೂರಬೇಕು, ಪದಗಳು ನಾಲಿಗೆಯನ್ನು ಸುಲಭವಾಗಿ ಹೊರಳಿಸಬೇಕು - ಆಗಲೇ ಹಾಡು ಪ್ರಸಿಧ್ಧವಾಗೋದು.ಈ ಹಾಡಿನಲ್ಲಿ ನನಗೆ ಇಷ್ಟವಾದ ಕೆಲವು ಸಾಲುಗಳು..

"ನವಿಲೇ ನವಿಲೇ ಸಿಟಿ ನವಿಲೇ..ಗರಿಯ ತೆರೆಯಲಾರೆಯ?"
(ಹುಡುಗನ ಪೀಟಿಕೆ. ಸಿಟಿ ನವಿಲಿಗೆ bracket ಹಾಕುವ ಪರಿ)

"ಲೈನ್-ಉ ಹೊಡಿಯೋ ಕಲೆಯಿಲ್ಲ..
ಪ್ಲಾನು ಮಾಡೋ ತಲೆಯಿಲ್ಲ..
ನಿನಗೆ ಹೆಣ್ಣೇ ಒಲಿಯೋಲ್ಲ.."
(ಹುಡುಗಿಯ ಸಾರ ಸಗಟು ತಿರಸ್ಕಾರ..ಮೇಲಿನ ಸಾಲುಗಳು ನಿಜ ಜೀವನದಲ್ಲೂ ಸತ್ಯವಾಗಿದ್ದರೆ, ನಮ್ಮ boys ಪೈಕಿ ಎಷ್ಟೋ ಜನ ಬ್ರಹ್ಮ ಚಾರಿಗಳಾಗೇ ಇರಬೇಕಿತ್ತು..ಸದ್ಯ, ವಾಸ್ತವತೆ ಬೇರೆಯಿದೆ! :D)

"ಜಗದ ಸನ್ಯಾಸಿ ಸೋಂಬೇರಿ..ನೀನು ಹು ಅಂದ್ರೆ ಸಂಸಾರಿ.."
(ಹೆಣ್ಣಿಗೆ ಇರುವ ಭಯಾನಕ ಶಕ್ತಿ..ಎಂಥವರನ್ನು ಬೀಳಿಸುವಂಥದ್ದು!..ನಾವ್ಗಳೂ ಸುಲಭವಾಗಿ ಬಿದ್ ಹೋಗ್ತೀವಿ ಅನ್ನೋದು ಬೇರೆ ವಿಚಾರ)

"ವರ್ಣ ಬೇಧ ಹೋಗಿಲ್ಲ..ಮೇಲು ಕೀಳು ಮರೆತಿಲ್ಲ..
ಒಂಟಿ ಹುಡುಗಿ ಹಿಂದೆ, ಕಳ್ಳರೆಲ್ಲ ಒಂದೇ!
ಜಾತಿ ಜಾತಿ ಸೇರೋಲ್ಲ..ಭಾಷೆ ಭಾಷೆ ಬೆರೆಯೋಲ್ಲ..
ಹುಡುಗಿ ಅಂದ್ರೆ ಮಂದಿ..ಜಾತಿ ಗೀತಿ ಚಿಂದಿ!"
(ಜಾತಿ ಪದ್ಧತಿ , ಭಾಷೆ ತಾರತಮ್ಯ , ಪ್ರಾಂತೀಯ ತಾರತಮ್ಯ - ಹೀಗೆ ನೂರಾರು ಅಸಹ್ಯ ಸುಳ್ಳುಗಳ ಮೇಲೆ ನಿಂತಿರುವ ಸಮಾಜದಲ್ಲಿ ಎಲ್ಲರನು ಒಂದೇ ರೀತಿ ಕಾಡುವ ಮಾಯೆ ಹೆಣ್ಣು! )

"ಮಿಂಚೆ ಮಿಂಚೆ ಮರಿ ಮಿಂಚೆ, ಮಿಂಚ ಹಂಚಿ ಹೊಗೆಯ?
ಮಿಂಚನ್ನು ಮುಟ್ಟಿದರೆ ಸುಟ್ಟು ಹೋಗಲಾರೆಯ?"
(ಉಬ್ಬಿಸುವ ಹುಮ್ಮಸ್ಸಿನಲ್ಲಿ ಹುಡುಗ..ಕಿತ್ತು ಒಗೆಯುವ ತವಕದಲ್ಲಿ ಹುಡುಗಿ)

ಹೀಗೆ, ಅಷ್ಟೇನೂ ಪೋಲಿ ಅಲ್ಲದ ಕಾಡುವ ಹಾಡು ಕೊಟ್ಟ ಹಂಸಲೇಖ, ರಾಜು ಸುಂದರಂ, ಸಿಲ್ಕ್ ಸ್ಮಿತಾ ಮತ್ತು "ಲಾಕಪ್ ಡೆತ್" ನ ನಿರ್ದೇಶಕ(ಥ್ರಿಲ್ಲರ್ ಮಂಜು?) - ಎಲ್ಲರಿಗು ಥ್ಯಾಂಕ್ಸ್.