Thursday, November 17, 2011

ಸೃಷ್ಟಿ

ಬಾಳಿಗೆ ಹುಮ್ಮಸ್ಸು,ಸ್ಫೂರ್ತಿ, ಅರ್ಥವನ್ನು  ಚೈತನ್ಯವು ಕೊಡುತ್ತದೆ..ಚೈತನ್ಯವು ಸೃಷ್ಟಿಯಿಂದ ಹುಟ್ಟುತ್ತದೆ..ಸೃಷ್ಟಿಗೆ ಕಾಯಬೇಕು,ಕನಸಬೇಕು,ನೋಯಬೇಕು,ಅನುಭವಿಸಬೇಕು..ಮೇಲಾಗಿ ಸಮಯವನ್ನು ನೀಡಬೇಕು..ಸೃಷ್ಟಿ ತಪಸ್ಸು..ಅದು ಪರಿಶ್ರಮವನ್ನು ನಿರೀಕ್ಷಿಸುತ್ತದೆ...
ಆಲಸ್ಯ ಸೃಷ್ಟಿಯ ಶತ್ರು..
ಕಳೆದು ಹೋದ, ನೆನಪಿಗೆ ಬಾರದ ದಿನಗಳ ಹಿಂದೆ ನಮ್ಮ ಆಲಸ್ಯ ನಿಂತಿರುತ್ತದೆ..
ಅಚ್ಚಳಿಯದ ನೆನಪುಗಳ ಜೊತೆ ಯಾವುದೋ ಸೃಷ್ಟಿ ಇರುತ್ತದೆ..
ಸೃಜನಶೀಲತೆ ಸೃಷ್ಟಿಗೆ ಮೂಲ..
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ? ಯಾವೊನಿಗೊತ್ತು?

Saturday, November 12, 2011

ಪೆಟ್ಟಿಗೆ!

ಮಾಗಬೇಕು ಮನಸು ಇನ್ನು ಪೆಟ್ಟಿನಿಂದ ಪೆಟ್ಟಿಗೆ..
ಗೆಳೆಯರೆಲ್ಲ ದೇವರಂತೆ, ಬಾಳು ನೀನು ಒಟ್ಟಿಗೆ!
ಬದುಕು ಒಂದು ಪಗಡೆ ಆಟ, ಅದೃಷ್ಟದ ಮಟ್ಟಿಗೆ..
ಗಾಢವಾಗಿ ಬಾಳಿ ನೋಡು, ಬದುಕು ಸುಖದ ಪೆಟ್ಟಿಗೆ!!

Wednesday, November 2, 2011

ನಲ್ಮೆ

ಬಾಳಿನಲಿ ನಲ್ಮೆ ಕರೆದಾಗ..
ಬಾಗಬೇಕು ಅದಕೆ ನಾವಾಗ..
ನಕ್ಕುಬಿಡು ಒಮ್ಮೆ ನನಗೀಗ..
ಕೊಟ್ಟು ಬಿಡುವೆ ಎಲ್ಲ ಅನುರಾಗ!! 

Tuesday, November 1, 2011

ನಡಿಗೆ

ನನ್ನದು ನಿನ್ನದು ಒಂದೇ ನಡಿಗೆ..
ಸಾಗಲಿ ಬದುಕು ಹೊಸದರ ಕಡೆಗೆ..
ನಾವಿಕ ನಾನು ಬಾಳಲಿ ನಿನಗೆ..
ನಾಯಕಿ ನೀನು ನನ್ನಯ ಮನೆಗೆ!!

ವಿಷಯ

ಹೇಳಲು ವಿಷಯವು ಇದ್ದರೆ, ಪದಗಳು ಬರುವವು ಕರೆದರೆ..
ಪದಗಳ ಕದಿಯದೆ ಇದ್ದರೆ, ಪ್ರಾಸಕ್ಕಿಲ್ಲ ತೊಂದರೆ..
ಪ್ರಾಸವು ಹೊಂದಿಕೆಯಾದರೆ, ಕವಿತೆ ಇಂದ್ರನ ಅಪ್ಸರೆ..
ಕವಿತೆಗೆ ಆಶಯ ಇದ್ದರೆ, ಸಾಲುಗಳೆಲ್ಲ ಸಕ್ಕರೆ!!

ಆಯಸ್ಸೆಷ್ಟು

ನಿನ್ನಲ್ಲಿರುವ ಆಯಸ್ಸೆಷ್ಟು?
ಕಳೆದದ್ದೆಷ್ಟು? ಉಳಿದಿದ್ದೆಷ್ಟು?
ಗತಿಸಿದ ದಿನಗಳ ಸಾರ್ಥಕವೆಷ್ಟು?
ನಲಿವುಗಳೆಷ್ಟು? ನೋವಿನ್ನೆಷ್ಟು?
ಅಸಲಿಗೆ ನೀನು ಬದುಕಿದ್ದೆಷ್ಟು?

ಇಲ್ಲಿನ ಲೆಕ್ಕ ಬಲ್ಲವರೆಷ್ಟು?
ಬದುಕಿಗೆ ಅರ್ಥ ನೀನಿಟ್ಟಷ್ಟು!