Thursday, January 19, 2012

ಬರವಣಿಗೆ ಕಷ್ಟ!

ತಲೆಯಲ್ಲಿರುವ ಆಲೋಚನೆಗಳನ್ನು ಪುಟಗಳ ಮೇಲೆ ಹರಡುವ ಕ್ರಿಯೆ ಕಷ್ಟದ್ದು. ರಾಜಾರೋಷವಾಗಿ ತಲೆಯಲ್ಲಿ ತಿರುಗುವ ಯೋಚನೆಗಳು ಹೊರಗೆ ಬರುವ ಹೊತ್ತಿಗೆ ಹಲವಾರು ಬೇಲಿಗಳನ್ನು ಎದುರು ಗೊಳ್ಳುತ್ತವೆ. 

ಪದಗಳ ಪ್ರಯೋಗ ಸರಿಯಾಗಿದೆಯೇ? ಸಾಲುಗಳು ದೊಡ್ದದಾಯಿತೆ? ಉಪಮೆಗಳು? ಅರ್ಥ? ವ್ಯಾಕರಣ? ಸರಳತೆ? ಸ್ಪಷ್ಟತೆ? ಗ್ರಾಂಥಿಕ ಭಾಷೆಯಲ್ಲಿ ಬರೆಯಲಾ ಅಥವಾ ಟಪೋರಿ ಭಾಷೆ ಉಪಯೋಗಿಸಲಾ? ಕತ್ರಿ, ಛತ್ರಿ, ಬಿತ್ರಿ ಎಂಬ ಚಮಕ್ ಪದಗಳನ್ನು ಚಲಾವಣೆ ಮಾಡಲಾ ಅಥವಾ ವೃತ್ತಾಂತ, ದೃಷ್ಟಾಂತ, ಸಿದ್ದಾಂತ ಎಂಬಂತಹ ಭಾರವಾದ ಪದಗಳು ಬೇಕ? ರಾಕೆಟ್ ಇಂದ ರಬ್ಬರ್ ವರೆಗೂ ಎಲ್ಲದರ ಬಗ್ಗೇನೂ ಜನ ಬರೆದಿದ್ದಾಗಿದೆ. ಇನ್ನು ನಾನು ಬರೆಯುವುದೆನಿದೆ..ಮಣ್ಣಂಗಟ್ಟಿ. ಹೀಗಿದ್ದರೂ ಬರೆಯಬೇಕೆ?

ಇಂತಹ ಎಷ್ಟೋ ಬೇಲಿಗಳನ್ನು ಗಾಯಗೊಳ್ಳದೆ ದಾಟಿ ಬರುವ ಆಲೋಚನೆಗಳ ಪೈಕಿ ಬರೆಸಿಕೊಳ್ಳಲು ಅರ್ಹವಾದವು ಎಷ್ಟೋ..ವರ್ಜ್ಯ ಎಷ್ಟೋ? ಯಾವೊನಿಗೊತ್ತು..ಶಿವಪ್ಪ ಕಾಯೋ ತಂದೆ..ಬರವಣಿಗೆ ಕಷ್ಟ!

Saturday, January 14, 2012

ಪಾರ್ಥನಿಗೆ ಕೃಷ್ಣ

ಹಂಬಲದ ದಾಹ..ಎಂದೂ ತೀರದ ಮೋಹ..
ದುರಹಂಕಾರಿಯ ಗರ್ವ, ಸೋಲಿನ ಮೊದಲನೇ ಪರ್ವ..
ಅನ್ನಕ್ಕೆ ವಗ್ಗರಣೆ..ಅರ್ಘ್ಯಕ್ಕೆ ಉದ್ಧರಣೆ..
ಆಡುವ ಮಾತಲಿ ಅರ್ಥ, ಇರದೇ ಇದ್ದರೆ ವ್ಯರ್ಥ..
ನೆನಪಿರದ ಕನಸು..ಕೂಡಿಟ್ಟ ಮುನಿಸು..
ನೈಜತೆ  ಇಲ್ಲದ ಬದುಕು, ತೊಳೆಯಲು ಆಗದ ಕೊಳಕು..
ಪಾರ್ಥನಿಗೆ ಕೃಷ್ಣ, ನಮಗೆ ಯಾರೋ? ಎತ್ತ? 

Monday, December 19, 2011

ಗೀಚುವಿಗೆ ೫೦


ಶಿವರಾಜ್ಕುಮಾರ್ ಗೆ ಕನ್ನಡ ಚಿತ್ರ ರಂಗದಲ್ಲಿ ಬೆಳ್ಳಿ ಹಬ್ಬದ ಸಂಭ್ರಮ."ಗೀಚು"ವಿಗೆ ೫೦ರ ಸಂಭ್ರಮ.ಶಿವರಾಜ್ಕುಮಾರ್ ಚಿತ್ರಗಳಲ್ಲಿ ಎಷ್ಟು ಓಡಿವೆಯೋ, ಇಲ್ಲಿರುವ ಒಳ್ಳೆ ಬರಹಗಳ ಸಂಖ್ಯೆ ಅಷ್ಟೇ.
  
ನನಗೆ ಪದಗಳನ್ನು ಪೋಣಿಸುವುದು ಎಂದರೆ ಇಷ್ಟ.ಭಾವಕ್ಕೆ ಅಕ್ಷರ ರೂಪವನ್ನು ಕೊಡುವುದರಲ್ಲಿ ಒಂಥರಾ ಮಜಾ. ಅದು, ಸುಡೋಕು ಮುಗಿಸಿದ ನಂತರ ಸಿಗುವಂಥ ಆನಂದ.ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಹೇಳುವುದರಲ್ಲಿ ಒಂದು ಕಿಕ್ ಇರುತ್ತದೆ.ಇಂಥ ಪುಟ್ಟ ಸಂತೋಷಗಳಿಗಾಗಿ ಬರೆದ ಬರಹಗಳು ಇಲ್ಲಿವೆ.ನನ್ನೆಲ್ಲಾ ಘನಘೋರ ಸೋಮಾರಿತನದ ಹೊರತಾಗಿಯೂ ಇಲ್ಲಿಯ ತನಕ ಬಂದಿದ್ದೇನೆ. ಖುಷಿಯಾಗಿದೆ.ಇಷ್ಟನ್ನು ಬರೆಯುವುದಕ್ಕೆ ೪ ವರ್ಷಗಳು ಬೇಕಾಯಿತು ಅನ್ನುವುದು ಮುಜುಗರದ ಸಂಗತಿ.೫೦ ಬರಹಗಳಿವೆ. ಓದಿಸಿಕೊಂಡರೆ ಓದಿ ಖುಷಿಪಡಿ. ಓದಿಸಿ ಕೊಂದರೆ, ಕ್ಷಮೆ ಇರಲಿ :)

ನನಗೆ ಅಕ್ಷರಗಳಷ್ಟೇ ಪ್ರೀತಿ, ಸಂಖ್ಯೆಗಳ ಮೇಲೆ. ಕೂಡುವ ಕಳೆಯುವ ಲೆಕ್ಕಗಳು ಇಷ್ಟ. ಹಾಗಾಗಿ ೫೦ರ ಈ ಲೆಕ್ಕಕ್ಕೆ ಸಂಭ್ರಮ.
ಶಿವರಾಜ್ಕುಮಾರ್ ಉಚ್ಚಾರದಷ್ಟೇ ಸ್ಪಷ್ಟ ಇಲ್ಲಿರುವ ಬರಹಗಳು.
ಪ್ರೀತಿ ಇರಲಿ. 

Sunday, December 18, 2011

ಬಿಡುಗಡೆ

ಸೋಲು ಒಂದು ನಿಲುಗಡೆ..
ಖುಷಿಯ ಹುಡುಕು ಒಳಗಡೆ..
ಪೆನ್ನು ಇಡು ಕೆಳಗಡೆ!
ಭಾವವೊಂದು ಬಿಡುಗಡೆ!!

Saturday, December 17, 2011

ಗರೀಬು ಹೃದಯ ಹಾಡಿದೆ

ಗರೀಬು ಹೃದಯ ಹಾಡಿದೆ..
ಖರಾಬು ಸಾಲು ಹೊಳೆದಿದೆ..
ಸಬೂಬು ಕೇಳಬಾರದೆ..
ಶರಾಬು ಒಳಗೆ ಇಳಿದಿದೆ..||೨||

ಮಳೆ ಬಂದು ನಿಂತು ಹೋಗಿದೆ..
ನೆನಪೊಂದು ಇಂದು ಕಾಡಿದೆ..
ಬಿಸಿಯಾದ ಕಾಫಿ ಇಲ್ಲದೆ..
ತಲೇನು ಕೆಟ್ಟು ಕೂತಿದೆ..
ನಿದ್ದೇನು ಬರದೆ ಹೋಗಿದೆ..ಬುದ್ಧಿಗೆ ಮಂಕು ಕವಿದಿದೆ..

ಗರೀಬು ಹೃದಯ ಹಾಡಿದೆ..
ಖರಾಬು ಸಾಲು ಹೊಳೆದಿದೆ..
ಸಬೂಬು ಕೇಳಬಾರದೆ..
ಶರಾಬು ಒಳಗೆ ಇಳಿದಿದೆ.. ||೨||

ಹಾಡೊಂದು ಬರೆಯಬೇಕಿದೆ..
ಸಾಲೊಂದು ಹುಡುಕಬೇಕಿದೆ..
ನೋವನ್ನು ಮರೆಯಬೇಕಿದೆ..
ಗೆಲುವನ್ನು ನೋಡಬೇಕಿದೆ..
ಖುಷೀನ ಹಂಚಬೇಕಿದೆ..ಗುರೀನ ತಲುಪಬೇಕಿದೆ..

ಗರೀಬು ಹೃದಯ ಹಾಡಿದೆ..
ಖರಾಬು ಸಾಲು ಹೊಳೆದಿದೆ!
ಸಬೂಬು ಕೇಳಬಾರದೆ..
ಶರಾಬು ಒಳಗೆ ಇಳಿದಿದೆ!!

(Written for this tune: http://www.youtube.com/watch?v=PmgVX-0W3vk&feature=related)

Thursday, December 15, 2011

ಜೀವನ ಪ್ರೀತಿ

ಕನಸಿನ ಹಿಂದೆ ಕನಸನು ಹೂಡು..
ನನಸಾಗಿಸಲು ಕೃಷಿಯನು ಮಾಡು..
ಜಾಡ್ಯವು ಎಂದೂ ಲೋಕದ ಪಾಡು..
ಆಡಿಸುವಾತನ ಮೆಚ್ಚಿಸಿ ನೋಡು..

ಕ್ರಿಯಾಶೀಲತೆ ಬದುಕಿನ ರೀತಿ!
ಚಿಮ್ಮಲಿ ದಿನವೂ ಜೀವನ ಪ್ರೀತಿ!!

Tuesday, December 13, 2011

ಗಡಿಗೆ

ಗತಿಸಿದ ಕ್ಷಣವನು ನೆನಪಿಗೆ ಕೂಡು..
ಮುಂದಿನ ಕ್ಷಣವನು ಬೆರಗಲಿ ನೋಡು..
ಈಗಿನ ಸಮಯವೇ ಅಮೃತ ಘಳಿಗೆ!
ಬದುಕೇ ಒಂದು ಮಾಯದ ಗಡಿಗೆ!!