Thursday, October 24, 2013

ಪದಗಳೆಲ್ಲ ಮಾರಿ

ರೆಕ್ಕೆ ಬಂದ ಕನಸು ಒಂದು ಮನಸಿನಿಂದ ಹಾರಿ
ಹೊರಟಿತೀಗ ಹುಡುಕಬೇಕು ಎಲ್ಲಿ ಅದರ ದಾರಿ?
ಆಲುಗಡ್ಡೆ ಬಜ್ಜಿ ಆಯ್ತು ಎಣ್ಣೆ ಒಳಗೆ ಜಾರಿ
ಮತ್ತೆ ಕವನ ಹುಟ್ಟಲಿಲ್ಲ.. ಪದಗಳೆಲ್ಲ ಮಾರಿ.. 

Friday, August 24, 2012

ಅಂತರ್ಧ್ವನಿ

ಲೋಕದ ನಿಯಮ ಗಾಳಿಗೆ ತೂರು
ಅಂತರ್ಧ್ವನಿಯ ಕರೆಯನು ಕೇಳು!
ನಿನ್ನನು ನೀನೇ ಮೋಸವ ಮಾಡದೆ
ನಿತ್ಯವು ಜೀವನ ಜೀವಿಸಿ ನೋಡು!!

Saturday, May 26, 2012

ಲಹರಿ

ಓಡಿತು ಚಿಗರೆ ವೈರಿಗೆ ಹೆದರಿ 
ನಾಳೆಗಳೆಲ್ಲವು ಮಾಯದ ನಗರಿ!
ಬದುಕಲಿ ಹರಿಯಲಿ ಪ್ರೀತಿಯ ಲಹರಿ 
ಅವನಿಗೆ ನಾವು ಆಟದ ಬುಗುರಿ!!

Thursday, May 3, 2012

ನನ್ನ ಪಾಡಿಗೆ ನಾನು

ಹಾಡಿನ ಧಾಟಿ ಮರೆಯುವ ಮುಂಚೆ ಪದಗಳನ್ನು ಗಟ್ಟಿ ಹೊಡೆಯಬೇಕು..
ಮುರಿದು ಬೀಳುವ ಮುಂಚೆ ಬದುಕಿಬಿಡಬೇಕು..
ಬದುಕಿಗೊಂದು ಅದಮ್ಯ ಚೈತನ್ಯ ಬೇಕಾಗಿದೆ..
ಕಲಿಯುವುದು ಬಹಳಷ್ಟಿದೆ..

ಜಲಧಿಯೊಳಗೆ ಮೀನು..
ನನ್ನ ಪಾಡಿಗೆ ನಾನು..

Friday, April 27, 2012

ಟಡಾನ್ ಟನ್ ಟಡಾನ್ !

ನೀರು ಕುಡಿದರೆ ತೂಕ ಇಳಿಯುತ್ತೆ
ಉಪ್ಪು ಬಿಟ್ಟರೆ ಬೀಪಿ ಹೋಗತ್ತೆ
ಬಿಟ್ಟಿ ಸಲಹೆಲಿ ಮಜಾ ಸಿಗತ್ತೆ 
ಟಡಾನ್ ಟನ್ ಟಡಾನ್ !

ಸ್ಕೂಲಿಗ್ ಹೋದರೆ ಡಿಗ್ರಿ ಸಿಗತ್ತೆ
ಕೆಲಸ ಮಾಡಿದ್ರೆ ಸಂಬಳ ಸಿಗತ್ತೆ
ನಿದ್ದೆ ಮಾಡಿದ್ರೆ ಏನ್ ಸಿಗತ್ತೆ?
ಟಡಾನ್ ಟನ್ ಟಡಾನ್ !

ಕಷ್ಟ ಪಟ್ಟರೆ ಫಲ ಸಿಗತ್ತೆ
ಬೆವರು ಸುರಿಸಿದರೆ ದುಡ್ಡು ಬರತ್ತೆ
ಏನು ಮಾಡಿದರೆ ಖುಷಿ ಸಿಗತ್ತೆ?
ಟಡಾನ್ ಟನ್ ಟಡಾನ್!

ಆಫೀಸ್ ನಲ್ಲಿಯೇ ನಿದ್ದೆ ಬರತ್ತೆ..
ಸ್ನಾನ ಮಾಡಿದ್ರೆ ಸುಸ್ತು ಆಗತ್ತೆ..
ಜೀವನ ಯಾಕೊ ಹೀಗ್ ಹಾಳಾಗತ್ತೆ..
ಟಡಾನ್ ಟನ್ ಟಡಾನ್ !

Saturday, April 21, 2012

ಸಂಭ್ರಮ!

ಕಾಡು ಮೇಡು ಅಲೆದು ಬಂದು ದಣಿದ ದಿನವು ಸಂಭ್ರಮ!
ಮರೆತ ಪದವು ಮತ್ತೆ ಸಿಗಲು ಬರೆವುದೊಂದು ಸಂಭ್ರಮ!
ಪಾದರಸವು ಹರಿಯುವಂತೆ, ಮನಕೆ ಖುಷಿಯು ಲಗ್ಗೆ ಇಡಲು,
ಎಲ್ಲ ಎಲ್ಲೆ ಮೀರಿ ಅಲ್ಲಿ, ಬದುಕೇ ಒಂದು ಸಂಭ್ರಮ!!

Tuesday, March 13, 2012

ಗೆಲುವಿನ ಸ್ಪರ್ಶ

ಗೆಲುವಿನ ಸ್ಪರ್ಶವು ಮೆತ್ತನೆ.. 
ಸೋಲು - ಗೆಲುವಿನ ಬಿತ್ತನೆ. 
ಬೀಸಲಿ ಗಾಳಿಯು ತಣ್ಣನೆ..
ಬದುಕಲಿ ತಿರುವು ಮೆಲ್ಲನೆ. 
ಸಾಗಲಿ ಬದುಕು ಸುಮ್ಮನೆ..ಸಾಗಲಿ ಬದುಕು ಸುಮ್ಮನೆ!